ಆಳುಪರದು, ಕರ್ನಾಟಕದ ಬಹಳ ಹಳೆಯ ರಾಜವಂಶಗಳಲ್ಲಿ ಒಂದು.
                                                ಅವರು ಕರ್ನಾಟಕದ ಕರಾವಳಿ ಪ್ರದೇಶಗಳನ್ನು ಬಹು ಕಾಲ ಆಳಿದರು. ಈ ವಂಶದ ಇತಿಹಾಸವು, ಅದರ ರಾಜರುಗಳ ಬಗ್ಗೆ
                                                ಲಭ್ಯವಿರುವ ಮಾಹಿತಿಗಳು ಸೂಚಿಸುವುದಕ್ಕಿಂತ ಸಾಕಷ್ಟು ಹಿಂದೆ ಹೋಗುತ್ತದೆ. ಆಳುಪರು ಕ್ರಿ.ಪೂ. ಮೂರನೆಯ
                                                ಶತಮಾನದಷ್ಟು ಹಿಂದೆಯೇ ಮಂಗಳೂರಿನ ಬಳಿಯ ಕಡಲತೀರ ಪ್ರದೇಶಕ್ಕೆ ವಲಸೆ ಬಂದಿರುವುದು ಸಾಧ್ಯ. ಅವರು ದಕ್ಷಿಣದ
                                                ಕಾಸರಗೋಡಿನಿಂದ ಇಂದಿನ ಉಡುಪಿಯವರೆಗಿನ ನಾಡನ್ನು ತಮ್ಮ ವಶಕ್ಕೆ ತೆಗೆದುಕೊಂಡು ಆಡಳಿತ ನಡೆಸಿದರು.
                                                ಮಂಗಳೂರು ಅವರ ಕೇಂದ್ರವಾಗಿತ್ತು. ಅವರ ಆಳ್ವಿಕೆಯು ಕ್ರಿಸ್ತಶಕದ ಮೊದಲ ಭಾಗದಿಂದ ಹಿಡಿದು, ಸುಮಾರು ಹದಿನೈದು ಶತಮಾನಗಳ ಕಾಲ ಎಡೆಬಿಡದೆ ಮುಂದುವರಿಯಿತು. ಅವರು
                                                    ಬೇರೆ ಬೇರೆ ಕಾಲಘಟ್ಟಗಳಲ್ಲಿ ತುಳುವ ನಾಡು(ದಕ್ಷಿಣ ಕನ್ನಡ), ಹೈವ ನಾಡು(ಉತ್ತರ ಕನ್ನಡ), ಕೊಂಕಣ,
                                                    ಪಶ್ಚಿಮ ಘಟ್ಟಗಳು ಮತ್ತು ಉತ್ತರ ಕೇರಳದ ಕೆಲವು ಭಾಗಗಳ ಮೇಲೆ ಆಳ್ವಿಕೆ ನಡೆಸಿದ್ದಾರೆ. ಈ ರಾಜವಂಶ
                                                    ಮತ್ತು ಅದರ ರಾಜರುಗಳ ಪ್ರಸ್ತಾಪವು, ಗ್ರೀಕ್ ಭೂಗೋಳಶಾಸ್ತ್ರಜ್ಞನಾದ ಟಾಲೆಮಿ(ಆಳುವಖೇಡ), ಐದನೆಯ ಶತಮಾನದ
                                                    ಹಲ್ಮಿಡಿ ಶಾಸನ, ಕದಂಬ ರವಿವರ್ಮನ ಗುಡ್ನಾಪುರ ಶಾಸ ಮತ್ತು ಅನುಕ್ರಮವಾಗಿ ಮಹಾಕೂಟ ಮತ್ತು ಐಹೊಳೆಗಳಲ್ಲಿ
                                                    ದೊರಕಿರುವ ಮಂಗಳೀಶ ಮತ್ತು ಇಮ್ಮಡಿ ಪುಲಿಕೇಶಿಯರ ಚಾಲುಕ್ಯ ಶಾಸನಗಳಲ್ಲಿ ಬಂದಿದೆ. (ಕ್ರಿ.ಶ. 610-642)
                                                    ಆ ಪ್ರದೇಶವು ಆಗ ಪ್ರಾಯಶಃ ಆಳ್ವಖೇಡ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಉದಯಾವರ ಅದರ ರಾಜಧಾನಿಯಾಗಿತ್ತು.
                                                    ಜೋಡಿ ಮೀನು ಆ ವಂಶದ ರಾಜಲಾಂಛನವಾಗಿತ್ತು. 
                                    
                                    
                                        ಈ ರಾಜವಂಶದ ಆಳ್ವಿಕೆಯನ್ನು, ಸಾಮಾನ್ಯವಾಗಿ, ಎರಡು ಸ್ಥೂಲ ಹಂತಗಳಲ್ಲಿ
                                            ವಿಂಗಡಿಸುತ್ತಾರೆ. ಹತ್ತನೆಯ ಶತಮಾಣದ ಮಧ್ಯಭಾಗದವರೆಗಿನ ರಾಜರನ್ನು ಪ್ರಾಚೀನ ಆಳುಪರೆಂದೂ ಹದಿನೈದನೆಯ
                                            ಶತಮಾನದ ಕೊನೆಯವರೆಗಿನ ಆಳುಪರನ್ನು ಮಧ್ಯಕಾಲೀನ ಆಳುಪರೆಂದೂ ಕರೆಯಲಾಗಿದೆ.
                                    
                                     
                                    
                                        ಆಳುವರಸನು ಶಾಸನಗಳಲ್ಲಿ ಕಂಡುಬರುವ ಮೊಟ್ಟಮೊದಲ ಆಳುಪ ರಾಜ.(ಕ್ರಿ.ಶ.
                                            650-663) ಅವನ ನಂತರ ಆಡಳಿತ ನಡೆಸಿದ ಪ್ರಮುಖ ದೊರೆಗಳೆಂದರೆ, ಚಿತ್ರವಾಹನ-1, ಆಳುವರಸ-2, ಚಿತ್ರವಾಹನ-2,
                                            ರಣಸಾಗರ, ಪೃಥ್ವೀಸಾಗರ,(ಆಳುವರಸ-3) ಮಾರಮ್ಮ,(ಆಳುವರಸ-4) ಮತ್ತು ದತ್ತಾಳುಪ. ಆಳುಪರ ಆಳ್ವಿಕೆಯ ಸುವರ್ಣಯುಗವೆಂದು
                                            ಕರೆಯಬಹುದಾದ ಆಳುವರಸ-1 ಮತ್ತು ಮೊದಲನೆಯ ಚಿತ್ರವಾಹನರ ಕಾಲದಲ್ಲಿ ಅವರು ಮಂಗಳಾಪುರ,(ಮಂಗಳೂರು) ಪೊಂಬುಚ,(ಹುಮಚ)
                                            ಮತ್ತು ಕದಂಬ ಮಂಡಳಗಳ ಮೇಲೆ ಒಡೆತನವನ್ನು ಸಂಪಾದಿಸಿಕೊಂಡಿದ್ದರು. ಅವರು, ಮದುರೆಯ ಪಾಂಡ್ಯರ ಸೈನ್ಯವನ್ನು
                                            ಮಂಗಳೂರಿನ ಬಳಿ ತಡೆದು ನಿಲ್ಲಿಸುವುದರಲ್ಲಿ ಯಶಸ್ವಿಯಾಗಿದ್ದರು. ಆದರೂ ಈ ಎಲ್ಲ ಘಟನೆಗಳ ಬಗ್ಗೆ ದೊರೆತಿರುವ
                                            ಚಾರಿತ್ರಿಕ ಆಧಾರಗಳು ಕಡಿಮೆಯೆಂದೇ ಹೇಳಬೇಕು.
                                    
                                    
                                        ಮಧ್ಯಕಾಲೀನ ಆಳುಪರನ್ನು ಕುರಿತು ಸಾಕಷ್ಟು ಮಾಹಿತಿಗಳು ದೊರೆತಿವೆ.
                                            ಅವರ ಆಳ್ವಿಕೆಯು, ಕುಂದವರ್ಮನಿಂದ (ಕ್ರಿ.ಶ. 950-980) ರಿಂದ ಮೊದಲಾಗಿ, ಕುಲಶೇಖರ-3 ಮತ್ತು ಇಮ್ಮಡಿ
                                            ವೀರಪಾಂಡ್ಯರವರೆಗೆ ಹರಡಿಕೊಂಡಿದೆ. ಅವರ ಆಳ್ವಿಕೆಯು ಬಹಮಟ್ಟಿಗೆ ತುಳುನಾಡಿಗೆ ಸೀಮಿತವಾಗಿತ್ತು. ಮಂಗಳಾಪುರ
                                            ಮತ್ತು ಬಾರಹಕನ್ಯಾಪುರಗಳು ಅವರ ರಾಜಧಾನಿಗಳಾಗಿದ್ದವು. ಭುಜಬಲ ಆಳುಪೇಂದ್ರ,(ಕವಿ ಆಳುಪೇಂದ್ರ) ಕುಲಶೇಖರ-1,(ಜಾಕಲದೇವಿಯ
                                            ಪತಿ) ಬಲ್ಲ ಮಹಾದೇವಿ, ವೀರಪಾಂಡ್ಯ ಮತ್ತು ಇಮ್ಮಡಿ ಕುಲಶೇಖರರು ಈ ಕಾಲದ ಪ್ರಮುಖ ರಾಜರು. ಚೋಳರು ಮತ್ತು
                                            ಹೊಯ್ಸಳರ ಜೊತೆಗಿನ ನಿರಂತರವಾದ ಕಲಹಗಳ ನಂತರವೂ ತಮ್ಮ ರಾಜ್ಯವನ್ನು ಕಾಪಾಡಿಕೊಳ್ಳಲು ಅವರಿಗೆ ಸಾಧ್ಯವಾಯಿತು.
                                            ಮೊದಮೊದಲು ವಿಜಯನಗರದ ಸಾಮ್ರಾಟರಿಗೆ ಸಾಮಂತರಾಗಿದ್ದ ಆಳುಪರು, ಕ್ರಮೇಣ ತಮ್ಮ ಸ್ವಾತಂತ್ರ್ಯವನ್ನು
                                            ಸರವಶಕ್ತವಾದ ಆ ಸಾಮ್ರಾಜ್ಯಕ್ಕೆ ಕಳೆದುಕೊಂಡರು.
                                    
                                    
                                        ಆಳುವರ ಆಳ್ವಿಕೆಯ ಅವಧಿಯಲ್ಲಿ ಮೊಗವೀರರು, ಬಿಲ್ಲವರು, ನಾಡವರು,
                                            ಬ್ರಾಹ್ಮಣರು ಮತ್ತು ಜೈನರ ಸಮುದಾಯಗಳು ಮುಖ್ಯವಾಗಿದ್ದವು.
                                    
                                    
                                         
                                    
                                        ಶಾಸನಗಳು, ಕಲೆಗಳು ಮತ್ತು ವಾಸ್ತುಶಿಲ್ಪ:
                                        ಸಹಜವಾಗಿಯೇ ಆಳುಪವಂಶವು ಕರಾವಳಿ ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯಕ್ಕೆ
                                            ತಳಹದಿಯನ್ನು ಹಾಕಿತು. 
                                    
                                    
                                        ಆಳುಪರ ಕಾಲದಲ್ಲಿ ದೊರೆತಿರುವ ಶಾಸನಗಳು ಕಿರುಗಾತ್ರದವು. ಇವುಗಳನ್ನು
                                            ಕನ್ನಡ ಅಥವಾ ಸಂಸ್ಕೃತ ಭಾಷೆಯಲ್ಲಿ ಬರೆಯಲಾಗಿದ್ದು, ಎಲ್ಲ ಶಾಸನಗಳೂ ಹಳಗನ್ನಡ ಲಿಪಿಯನ್ನು ಬಳಸುತ್ತವೆ.
                                            ಸಾಮಾನ್ಯವಾಗಿ ಅವುಗಳನ್ನು ಬರೆದಿರುವ ಕಾಲವನ್ನು ಹೇಳಿರುವುದಿಲ್ಲ. ಅವುಗಳನ್ನು ಹೋಲಿಸಿ ನೋಡಿದಾಗ,
                                            ಲಿಪಿಯ ಸ್ವರೂಪದಲ್ಲಿ ಅಷ್ಟೇನೂ ಬದಲಾವಣೆ ಆಗದಿರುವುದು ಕಂಡುಬರುತ್ತದೆ. ಅವುಗಳನ್ನು ಬಳಸಿಕೊಂಡು ತುಳುನಾಡಿನ
                                            ಸಾಮಾಜಿಕ ಹಾಗೂ ರಾಜಕೀಯ ಚರಿತ್ರೆಯನ್ನು ಮರಳಿ ಕಟ್ಟುವುದು ಅಸಾಧ್ಯ. ಏಕೆಂದರೆ, ಈ ಚಿಕ್ಕ ಶಾಸನಗಳಲ್ಲಿ
                                            ಇರುವ ಮಾಹಿತಿಯೇ ಕಡಿಮೆ. 
                                    
                                    
                                        ಎಂಟನೆಯ ಶತಮಾನದ ಪೂರ್ವಾರ್ಧಕ್ಕೆ ಸೇರಿದ ಬೆಳ್ಮಣ್ಣು ಶಾಸನವು,
                                            ಕರ್ನಾಟಕದಲ್ಲಿ ದೊರೆತಿರುವ ಅತ್ಯಂತ ಹಳೆಯ ತಾಮ್ರಶಾಸನ. ಕನ್ನಡ ಲಿಪಿಯಲ್ಲಿ ರಚಿತವಾಗಿರುವ, ಸಾಕಷ್ಟು
                                            ದೊಡ್ಡದಾದ ಈ ಶಾಸನವು ಇಮ್ಮಡಿ ಆಳುವರಸನ ಕಾಲಕ್ಕೆ ಸೇರಿದ್ದು. ಇದು ಉಡುಪಿ ಜಿಲ್ಲೆಯ, ಕಾರ್ಕಳ ತಾಲ್ಲೂಕಿನ
                                            ಬೆಳ್ಮಣ್ಣು ಎಂಬ ಊರಿನಲ್ಲಿ ದೊರಕಿದೆ. ಇದರಲ್ಲಿ, ಆ ವಂಶದ ರಾಜಲಾಂಛನವಾದ ಜೋಡಿ ಮೀನುಗಳನ್ನು ಕಾಣಬಹುದು.
                                            ಹಾಗೆಯೇ ಉಡುಪಿ ತಾಲ್ಲೂಕಿನ ವಡ್ಡರ್ಸೆಯಲ್ಲಿ ಸಿಕ್ಕಿರುವ ಶಿಲಾಶಾಸನವು, ಆಳುಪರ ರಾಜವಂಶಕ್ಕೆ ಸೇರಿದ
                                            ಮೊಟ್ಟಮೊದಲ ಶಾಸನ.(ಏಳನೆಯ ಶತಮಾನ) ಅವರ ಕಾಲದಲ್ಲಿ ದೊರೆತಿರುವ ಸುಮಾರು 200 ಶಾಸನಗಳಲ್ಲಿ ಕೆಲವನ್ನು
                                            ಸಂಪೂರ್ಣವಾಗಿ ಓದಲು ಇಂದಿಗೂ ಸಾಧ್ಯವಾಗಿಲ್ಲ. ಅವುಗಳಲ್ಲಿ ಬಳಸಲಾಗಿರುವ ಕೆಲವು ಮಾತುಗಳನ್ನು ಆ ಕಾಲದ
                                            ಉಪಭಾಷೆಗಳಿಂದ ತೆಗೆದುಕೊಂಡಿರುವಂತೆ ತೋರುತ್ತದೆ. ಅಂತಹ ಶಾಸನಗಳ ಆಳವಾದ ಅಧ್ಯಯನವು ಕನ್ನಡ ಭಾಷೆಯ
                                            ಪ್ರಾಚೀನ ಸ್ವರೂಪಕ್ಕೆ ಸಂಬಂಧಿಸಿದ ಉಪಯುಕ್ತವಾದ ಮಾಹಿತಿಗಳನ್ನು ನೀಡಬಹುದು. 
                                    
                                    
                                        ಆಳುಪರು ಉಡುಪಿ ಮತ್ತು ಮಂಗಳೂರಿನ ಟಂಕಸಾಲೆಗಳಲ್ಲಿ ಅಚ್ಚುಹಾಕಿದ
                                            ಬಂಗಾರದ ನಾಣ್ಯಗಳನ್ನೂ ವೃತ್ತಾಕಾರದ ತಾಮ್ರದ ನಾಣ್ಯಗಳನ್ನೂ ಬಳಕೆಗೆ ಬಿಟ್ಟಿದ್ದಾರೆ. ಆ ನಾಣ್ಯಗಳ
                                            ಒಂದು ಬದಿಯಲ್ಲಿ ರಾಜಲಾಂಛನವಾದ ಜೋಡಿಮೀನುಗಳನ್ನೂ ಇನ್ನೊಂದು ಬದಿಯಲ್ಲಿ ‘ಶ್ರೀ
                                                ಪಾಂಡ್ಯ ಧನಂಜಯ’ ಎಂಬ ಹೆಸರನ್ನೂ ಕಾಣಬಹುದು. ನಾಣ್ಯಗಳ
                                                    ಮೇಲಿನ ಲಿಪಿಯು ಹಳಗನ್ನಡ ಅಥವಾ ದೇವನಾಗರಿಯಲ್ಲಿದೆ. 
                                    
                                    
                                        ಸಾಮಾನ್ಯವಾಗಿ ಈ ಕಾಲದ ದೇವಾಲಯಗಳು ಬಾದಾಮಿ ಚಾಳುಕ್ಯ ಮತ್ತು
                                            ಕಲ್ಯಾಣಿ ಚಾಳುಕ್ಯರ ವಾಸ್ತುಶಿಲ್ಪದಿಂದ ಸ್ಫೂರ್ತಿ ಪಡೆದಿವೆ. ಆದರೂ ದೀರ್ಘಕಾಲದ ನಿರಂತರ ಸಂಪರ್ಕದ
                                            ಫಲವಾಗಿ, ಪಲ್ಲವ ಮತ್ತು ಚೋಳ ವಾಸ್ತುಶಿಲ್ಪಗಳ ಛಾಯೆಗಳನ್ನೂ ಗುರುತಿಸಬಹುದು. ಪರಿಣಾಮವಾಗಿ, ಆಳುಪರದೆಂದೇ
                                            ಗುರುತಿಸಬಹುದಾದ ವಿಶಿಷ್ಟ ಶೈಲಿ ಯಾವುದೂ ಇಲ್ಲ. ಆಳುಪರ ಆಳ್ವಿಕೆಯ ಬೇರೆ ಬೇರೆ ಘಟ್ಟಗಳಲ್ಲಿ ರೂಪಿತವಾದ
                                            ಮುಖ್ಯ ದೇವಾಲಯಗಳನ್ನು ಕುರಿತ ಕೆಲವು ವಿವರಗಳು ಈ ರೀತಿ ಇವೆ:
                                    
                                        - ಮಾರ್ಕಂಡೇಶ್ವರ ದೇವಾಲಯ, ಬಾರಕೂರು, ಎಂಟನೆಯ ಶತಮಾನ
                                        
 
                                        - ಮಹಾಲಿಂಗೇಶ್ವರ ದೇವಾಲಯ, ಬ್ರಹ್ಮಾವರ, ಒಂಬತ್ತನೆಯ ಶತಮಾನ
                                        
 
                                        - ಸೇನೇಶ್ವರ ದೇವಾಲಯ, ಬೈಂದೂರು 
 
                                        - ಶ್ರೀ ರಾಜರಾಜೇಶ್ವರಿ ದೇವಾಲಯ, ಪೊಳಲಿ 
 
                                        - ಶ್ರೀ ಮಂಜುನಾಥೇಶ್ವರ ದೇವಾಲಯ, ಕದ್ರಿ 
 
                                        - ಮಹಿಷಮರ್ದಿನಿ ದೇವಾಲಯ, ನೀಲಾವರ (ದುರ್ಗಾಭಗವತಿ)
                                        
 
                                        - ಶ್ರೀ ಪಂಚಲಿಂಗೇಶ್ವರ ದೇವಾಲಯ, ವಿಟ್ಲ 
 
                                        - ಅನಂತೇಶ್ವರ ದೇವಾಲಯ, ಉಡುಪಿ 
 
                                    
                                    
                                        ಈ ದೇವಾಲಯಗಳ ವಾಸ್ತುಶಿಲ್ಪ ಮತ್ತು ವಿಗ್ರಹಗಳು ವಿವಿಧ ಶೈಲಿಗಳ
                                            ಸಂಯೋಜನೆಯಾಗಿವೆ. 
                                    
                                    
                                        ಇವುಗಳನ್ನು ಕಪ್ಪು ಗ್ರಾನೈಟ್ ಕಲ್ಲು, ಬಳಪದ ಕಲ್ಲು ಮತ್ತು ನಸು
                                            ಕೆಂಪು ಶಿಲೆಗಳಿಂದ ರೂಪಿಸಲಾಗಿದೆ.
                                    
                                    
                                        ಹೀಗೆ, ಆಳುಪರು ಕರ್ನಾಟಕದ ಪ್ರಾಚೀನತಮ ರಾಜವಂಶಗಳಲ್ಲಿ ಒಂದಾದ
                                            ಆಳುಪರು ಕರಾವಳಿ ಕರ್ನಾಟಕದ ರಾಜಕೀಯ ವಿಕಸನದಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ.
                                    
                                    
                                         
                                    
                                        ಮುಂದಿನ ಓದು ಮತ್ತು ಲಿಂಕುಗಳು: 
                                    
                                    
                                        
                                        
                                            - 
                                                Inscriptions of the Alupas: 
 
                                            - Coins of the Alupas
 
                                            - Copper plate of Aluvarasa-II
 
                                            - 
                                                
                                                    
                                                        Alupas - Wikipedia, the free encyclopedia